ಶ್ರೀಯುತ ಶರ್ಮರ ಜನ್ಮದಿನ ವಿಚಾರ

ವಿದ್ವಾನ್ ಎನ್. ರಂಗನಾಥಶರ್ಮರು ತಾವೇ ಬರೆದ ತಮ್ಮ ಪರಿಚಯ ಪತ್ರದಲ್ಲಿ ಜನ್ಮದಿನವನ್ನು ೦೭–೦೪–೧೯೧೬ ಎಂದು ಬರೆದಿದ್ದಾರೆ. ಆದರೆ ಈ ದಿನಾಂಕದ ಬಗೆಗೆ ಗೊಂದಲವಿದೆ.

ಜಿಜ್ಞಾಸೆ ೧: ಶ್ರೀಯುತ ಶರ್ಮರು ತಾನು ಶಂಕರಪಂಚಮಿಯ ದಿನ ಪುನರ್ವಸು ನಕ್ಷತ್ರದಲ್ಲಿ ಜನಿಸಿದ್ದು ಎಂದು ಹೇಳುತ್ತಿದ್ದರು ಹಾಗೂ ತಮ್ಮ ಜನ್ಮ ದಿನಾಚರಣೆಯನ್ನು ಶಂಕರಪಂಚಮಿಯಂದೇ ಆಚರಿಸುತ್ತಿದ್ದರು. ೦೭–೦೪–೧೯೧೬ ರಂದು ಚೈತ್ರ ಶುದ್ಧ ಪಂಚಮಿಯಾಗಿತ್ತು ಹಾಗೂ ಅಂದಿನ ನಕ್ಷತ್ರ ರೋಹಿಣಿ. ಆದ್ದರಿಂದ ೦೭–೦೪–೧೯೧೬ರಂದು ಶ್ರೀಯುತರ ಜನ್ಮದಿನವಾಗಿರಲು ಸಾಧ್ಯವೇ ?

ಸಮಾಧಾನ: ತಿಥಿ ಮಾಸ ನಕ್ಷತ್ರಗಳನ್ನು ಪ್ರಧಾನವಾಗಿ ಪರಿಗಣಿಸಿ ೦೭–೦೪–೧೯೧೬ರಂದು ಇದಾವುದೂ ಹೊಂದಿಕೆಯಾಗದಿರುವುದರಿಂದ ಈ ದಿನ ಅವರ ಜನ್ಮರ ಜನ್ಮದಿನವಲ್ಲವೆಂದು ತಿಳಿಯುವುದು.

ಜಿಜ್ಞಾಸೆ ೨: ೧೯೧೬ ರ ವೈಶಾಖ ಶುದ್ಧ ಪಂಚಮಿಯಂದು ಜನಿಸಿರಬಹುದೇ ?

ಸಮಾಧಾನ: ೦೭–೦೫–೧೯೧೬ ರಂದು ವೈಶಾಖಶುದ್ಧ ಪಂಚಮಿಯಾಗಿದೆ. ಈ ದಿನ ಬೆಳಗ್ಗೆ ೧೦ ರ ನಂತರ ಪುನರ್ವಸು ನಕ್ಷತ್ರವೂ ಆಗಿರುವುದರಿಂದ ೦೭–೦೫–೧೯೧೬ರಂದು ಶ್ರೀಯುತರ ಜನ್ಮದಿನವೆಂದು ತಿಳಿಯುವುದು.

ಜಿಜ್ಞಾಸೆ ೩: ಹಾಗಿದ್ದರೆ ಶ್ರೀಯುತ ಶರ್ಮರೇ ಸ್ವತಃ ೦೭–೦೪–೧೯೧೬ ಎಂದು ಬರೆದಿರುವುದೇಕೆ ?

ಸಮಾಧಾನ: ಶ್ರೀಯುತ ಶರ್ಮರನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಕಾರಣಾಂತರಗಳಿಂದ ಹಿರಿಯರು ೦೭–೦೪–೧೯೧೬ ಎಂದು ನೀಡಿರುತ್ತಾರೆ. ಸರಕಾರೀ ದಾಖಲೆಗಳಲ್ಲಿರುವುದನ್ನೇ ಅವರು ಹೇಳಬೇಕಾಗಿರುವುದರಿಂದ ಆ ದಿನಾಂಕವನ್ನೇ ಬರೆದಿರಬಹುದು. ಆದರೆ ಶಂಕರಜಯಂತಿಯಂದು ಜನ್ಮದಿನಾಚರಣೆ ಮಾಡುತ್ತಿದ್ದುದರಿಂದ ೧೯೧೬ರ ಶಂಕರಜಯಂತಿ ೦೭–೦೫–೧೯೧೬ರಂದು ಬಂದಿರುವುದರಿಂದ ಹಾಗೂ ಆ ದಿನ ಪುನರ್ವಸು ನಕ್ಷತ್ರವೂ ಇರುವುದರಿಂದ ಇದೇ ದಿನ ಶ್ರೀಯುತರ ಜನ್ಮದಿನವೆಂಬುದಾಗಿ ತಿಳಿಯಬಹುದು.

ಈ ವಿಚಾರದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ತಿಳಿದವರು ನೀಡಿದಲ್ಲಿ ಸ್ವೀಕರಿಸಲು ಸದಾ ಸಿದ್ದರಿದ್ದೇವೆ.