ನಮ್ಮ ತಂದೆಯನ್ನು ನಾನು ಕಂಡಂತೆ - ಜಯಶ್ರೀ ಶ್ರೀನಿವಾಸ್

ನಮ್ಮ ತಂದೆ ಎಂದ ಕೂಡಲೇ ಥಟ್ಟನೆ ನನಗೆ ನೆನಪಾಗುವುದು ಬಾಲ್ಯದ ಒಂದು ಘಟನೆ. ಆಗ ನಾನು ೬-೭ ವರ್ಷದವಳಿರಬಹುದು. ವಠಾರವೊಂದರಲ್ಲಿ ನಮ್ಮ ವಾಸ. ನನ್ನ ಅಣ್ಣ, ಅಕ್ಕ, ತಮ್ಮ ಹಾಗೂ ನಾನೂ ಸೇರಿದಂತೆ ವಠಾರದ ಅಕ್ಕಪಕ್ಕದ ಮಕ್ಕಳನ್ನು ಕಲೆಹಾಕಿ ನಮ್ಮ ತಂದೆ ಸಂಸ್ಕೃತ ಹೇಳಿಕೊಡುತ್ತಿದ್ದರು. ಪ್ರತಿನಿತ್ಯ ಹಿಂದಿನ ದಿನ ನಿಗದಿಮಾಡಿದ್ದ ಬಾಯಿಪಾಠವನ್ನು ತಪ್ಪದೇ ಒಪ್ಪಿಸಬೇಕಾಗುತ್ತಿತ್ತು. ಆ ದಿನ ನಿಗದಿಗೊಳಿಸಿದ್ದ ಅಮರಕೋಶದ ಸಾಲುಗಳನ್ನು ಆಟದ ಹುಮ್ಮಸ್ಸಿನಲ್ಲಿ ನಾನು ಕಂಠಸ್ಥ ಮಾಡಿಕೊಂಡಿರಲಿಲ್ಲ. ಉಳಿದವರೆಲ್ಲರೂ ತಪ್ಪದೇ ಹೇಳುತ್ತಿದ್ದಾರೆ. ನನಗೆ ಒಳಗೇ ತೀವ್ರ ಆತಂಕ. ಮಿಕ್ಕವರ ಎದುರು ಅವಮಾನವಾಗುತ್ತದೆ ಎಂಬ ಅಳುಕಿಗಿಂತ ಬಾಯಿಪಾಠ ತಪ್ಪಿಸಿದ್ದಕ್ಕೆ ತಂದೆಯವರ ಸಿಟ್ಟನ್ನು ಎದುರಿಸಬೇಕಲ್ಲ ಎಂದು. ಇನ್ನೇನು ನನ್ನ ಸರದಿ ಬಂದೇ ಬಿಟ್ಟಿತು ಎನ್ನುವಾಗ ಹುಸಿ ಕೆಮ್ಮನ್ನು ನಟಿಸಲಾರಂಭಿಸಿದೆ. ತಂದೆಯವರು ಕಾದೇ ಕಾದರು. ನನ್ನ ಕೆಮ್ಮು ನಿಲ್ಲುವ ಸೂಚನೆ ಕಾಣಿಲಿಲ್ಲ. ಬೇಸತ್ತ ಅವರು ಹೊರಗೆ ನಡಿ ಎಂದು ಗದರಿಸಿದರು. ಪಾರಾದೆ ಎಂದು ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದೆ. ಈ ಘಟನೆಯನ್ನು ಏಕೆ ಹೇಳುತ್ತಿದ್ದೀನಿ ಎಂದರೆ ಕಲಿಯುವಿಕೆಯಲ್ಲಿ ಅವರಿಗಿದ ಶಿಸ್ತು, ಕಟ್ಟುನಿಟ್ಟು ಕಲಿಸುವಿಕೆಯಲ್ಲೂ ತೋರಿಬರುತ್ತಿತ್ತು. ಕೊನೆಯವರೆಗೂ ಅಧ್ಯಯನದಲ್ಲಿ ಅವರಿಗಿದ್ದ ಶ್ರದ್ಧೆ ಬೆರಗುಗೊಳಿಸವಂತಹುದು. ಪ್ರತಿನಿತ್ಯ ಹಲವಾರು ಘಂಟೆಗಳು ಅಧ್ಯಯನ, ಬರವಣಿಗೆಗೆ ಮೀಸಲು. ಬರೆದೂ ಬರೆದೂ ಅವರ ಬಲಗೈಯ ಮಧ್ಯದ ಬೆರಳಿನಲ್ಲಿ ಶಾಶ್ವತ ಗಂಟೇ ಉಂಟಾಗಿತ್ತು. ಅವರ ಬರವಣಿಗೆ ಬಾಲ್ಯದಲ್ಲಿಯೇ ನಮ್ಮ ಮೇಲೆ ಎಷ್ಟು ಪರಿಣಾಮ ಬೀರಿತ್ತೆಂದರೆ ಹಾಳೆಗಳ ಮೇಲೆ ಗೀಚುವುದೇ ನಮ್ಮ ಮುಖ್ಯ ಆಟವಾಗಿತ್ತು. ನಮ್ಮ ತಾಯಿ ನಾವು ಕೇಳಿದ ಕೂಡಲೇ ಸಿಗುವಂತೆ ಹಾಳೆಗಳನ್ನು, ಪೆನ್ಸಿಲ್ ಗಳನ್ನು ಪ್ರತ್ಯೇಕವಾಗಿ ಇಡುತ್ತಿದ್ದರು.

ಓದುವಾಗ, ಬರೆಯುವಾಗ ಹಾಗೂ ಚಿಂತನೆಯಲ್ಲಿದ್ದಾಗ ಅವರಿಗಿದ್ದ ಏಕಾಗ್ರತೆ ತೀವ್ರವಾದದ್ದು. ರಸ್ತೆಯಲ್ಲಿ ನಾವು ಅವರ ಎದುರೇ ಬಂದರೂ ಪಕ್ಕದಲ್ಲೇ ಹಾಯ್ದರೂ ಅವರಿಗೆ ಗೊತ್ತಾಗುತ್ತಿರಲಿಲ್ಲ. ತೀವ್ರ ಚಿಂತನೆಯಲ್ಲಿ ಮುಳುಗಿದ್ದಾಗ ನಾವೇನಾದರೂ ಹೇಳಿಕೇಳಿ ಮಾಡಿದರೆ ಪ್ರತ್ಯುತ್ತರಿಸಿದವರು ಆಮೇಲೆ ನೀನು ನನಗೆ ಯಾವಾಗ ಹೇಳಿದೆ ಎಂದು ಕೇಳುತ್ತಿದ್ದರು. ಯಾವ ಸಮಯದಲ್ಲಿ ಅವರನ್ನು ಮಾತನಾಡಿಸಬೇಕು ಎಂದು ನಾವೇ ಕಲಿತೆವೆನ್ನಿ.

ಯಾವ ವಿಷಯವನ್ನು ಅರಿಯುವುದಾದರೂ ಅವರಿಗೆ ಅದರ ಆಳಕ್ಕೆ ಹೋಗಬೇಕು. ದಿನನಿತ್ಯಕ್ಕೆ ಸಂಬಂಧಿಸಿದ ವಿಷಯಗಳಿಗೂ ಶಾಸ್ತ್ರಾಧ್ಯಯನಕ್ಕೂ ಭೇದವೇ ಇಲ್ಲದ ತಲಸ್ಪರ್ಶಿ ಮಾರ್ಗವನ್ನೇ ಅವರು ಅನುಸರಿಸಿದ್ದು. ಅಮೇರಿಕಾಗೆ ನನ್ನ ಅಕ್ಕನ ಮನೆಗೆ ಬಂದಾಗ ಅವಳ ಮನೆ ಎದುರಿಗೆ ಯಾರೋ ಮನೆಯೊಂದನ್ನು ಕಟ್ಟುತ್ತಿದ್ದರು. ಸ್ಥಳದಲ್ಲಿಯೇ ನಿಂತು ಕಟ್ಟುವ ಶೈಲಿಯನ್ನು ತಿಳಿದುಕೊಂಡದ್ದೇ ಅಲ್ಲದೆ ಪುಸ್ತಕಾಲಯದಿಂದ ಪುಸ್ತಕಗಳನ್ನು ತರಸಿಕೊಂಡು ಓದಿ ಕೆಲವು ವರ್ಷಗಳಿಂದ ಅಲ್ಲಿ ವಾಸವಿದ್ದ ನಮಗೇ ವಿವರಿಸಿ ಹೇಳಿದರು. ಪ್ರೇಕ್ಷಣೀಯ ಸ್ಥಳಗಳನ್ನು ನೋಡುತ್ತಲೇ ಎರಡೂವರೆ ತಿಂಗಳುಗಳ ಕಾಲ ಅಲ್ಲಿದ್ದ ಅವರು ಭಾರತದಲ್ಲಿ ಸಮಾರಂಭ, ಭಾಷಣ ಎಂದು ಸಮಯವೇ ಸಿಕ್ಕುವುದಿಲ್ಲ. ಇಲ್ಲಾದರೆ ಯಾವ ಕಾಟವೂ ಇಲ್ಲ ಎನ್ನುತ್ತ ಭಾಗವತದ ಏಕಾದಶ, ದ್ವಾದಶ ಸ್ಕಂದಗಳ ಅನುವಾದ ಮಾಡಿ ಮುಗಿಸಿಬಿಟ್ಟರು.

ನಮ್ಮ ತಾಯಿಯ ಅಕಾಲಿಕ ಮರಣ ನಮ್ಮೆಲ್ಲರಿಗೂ ತೀವ್ರ ಆಘಾತವನ್ನುಂಟುಮಾಡಿತು. ತಾಯಿಯಾಗಿ, ತಂದೆಯಾಗಿ ಎಲ್ಲ ಕರ್ತವ್ಯಗಳನ್ನೂ ನಮ್ಮ ತಂದೆ ಕೆಲಸ, ಬರಹಗಳ ಜೊತೆ ಕೊನೆಯವರೆಗೂ ಮಾಡಿದರು. ಅವರಿಗಿದ್ದ ಕರ್ತವ್ಯ ಪ್ರಜ್ಞೆ ಅತ್ಯಂತ ನಿಖರವಾದದ್ದು. ನನಗೆ ಇದು ಎಷ್ಟೋ ಸಲ 'ಅತಿ' ಎನಿಸಿ, ಏಕೆ ಇನ್ನೂ ಕರ್ತವ್ಯ, ಕರ್ತವ್ಯ ಎಂದು ಒದ್ದಾಡುತ್ತಿದ್ದೀರ ಎಂದು ಹೇಳಿದ್ದುಂಟು. ಅವರಲ್ಲಿದ್ದ ಸಮಯಪ್ರಜ್ಞೆಯೂ ಕರ್ತವ್ಯ ಪ್ರಜ್ಞೆಯಷ್ಟೇ ನಿಖರವಾದದ್ದು. ಮಾಡುವ ಕೆಲಸದಲ್ಲಿ ಅಚ್ಚುಕಟ್ಟು, ಮಾತಿನಲ್ಲಿ ಬದ್ಧತೆ ಅವರ ಹುಟ್ಟುಗುಣಗಳಾಗಿದ್ದವು. ಮಾತಿನಲ್ಲಿ ಸ್ಪಷ್ಟತೆಯನ್ನು ಯಾವಾಗಲೂ ಪಾಲಿಸುತ್ತಿದ್ದ ಅವರ ಜೊತೆ ಮಾತನಾಡುವಾಗ ಪೇಚಿಗೆ ಸಿಕ್ಕಿಬಿದ್ದ ಸಂದರ್ಭಗಳು ಬಹಳ ಇವೆ.

ಮೊದಲಿನಿಂದಲೂ ನನಗೆ ನಮ್ಮ ತಂದೆಯವರಲ್ಲಿದ್ದ ಅತ್ಯಂತ ಪ್ರಿಯವಾದ ಗುಣವೆಂದರೆ ಅವರಲ್ಲಿದ್ದ ವಿನಯ. ಬಿರುದು, ಬಾವಲಿಗಳು ಅವರಲ್ಲಿ "ಅಹಂ" ಹುಟ್ಟಿಸಿರಲಿಲ್ಲ. ದೂರದೇಶದಲ್ಲಿದ್ದ ನನಗೆ ಒಮ್ಮೆಯಾದರೂ ತನಗೆ ಇಂತಹ ಪ್ರಶಸ್ತಿ ಬಂದಿದೆ ಎಂದು ಹೇಳಿದವರಲ್ಲ. ನನಗೆ ತಿಳಿಸಲಿಲ್ಲ ಎಂಬ ನನ್ನ ಆಕ್ಷೇಪಣೆಗೆ ಅವರಿಂದ ಬರುತ್ತಿದ್ದ ಉತ್ತರ 'ಅದರಲ್ಲೇನಿದೆ ಹೇಳುವುದಕ್ಕೆ!' ಭಾರತ ದರ್ಶನದಲ್ಲಿ 'ವಿಶ್ವಾಮಿತ್ರ' ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ವಿಷಯ ನಮ್ಮ ತಾಯಿಗೇ ಗೊತ್ತಿರಲಿಲ್ಲವಂತೆ. ಅವರು 'ಇದ್ಯಾರೋ ವಿಶ್ವಾಮಿತ್ರ' ಎನ್ನುವವರು ತುಂಬಾ ಚೆನ್ನಾಗಿ ಬರೆಯುತ್ತಾರೆ ಎಂದು ಹೇಳುತ್ತಿದ್ದರಂತೆ. ಕೊನೆಗೂ ನಮ್ಮ ತಾಯಿಗೆ ಸತ್ಯ ತಿಳಿದಿದ್ದು ಬೇರೆಯವರ ಮೂಲಕ!

ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಕೊನೆಯವರೆಗೂ ಅದನ್ನು ಪಾಲಿಸಿಕೊಂಡು ಬಂದಿದ್ದ ಅವರು ನಮ್ಮ ಮೇಲೆ ಯಾವ ಅಭಿಪ್ರಾಯಗಳನ್ನೂ ಹೇರಿದವರಲ್ಲ. ವಿದ್ಯಾಭ್ಯಾಸ, ವಿವಾಹ ಮೊದಲಾದ ಮುಖ್ಯ ತೀರ್ಮಾನಗಳನ್ನು ನಮಗೇ ಬಿಟ್ಟಿದ್ದರು. ನನ್ನ ಅಕ್ಕ ವೈದ್ಯಳಾಗಲು ಹೊರಟಾಗ ಹುಡುಗಿಗೆ ಏಕೆ ಇದು ಎಂದು ಕೆಲವರು ಹೇಳಿದರೂ, ನಮ್ಮ ತಂದೆಯವರ ವಿರುದ್ಧ ತಿಲವಷ್ಟು ಇರಲಿಲ್ಲ. ನನ್ನ ಅಣ್ಣ ತಾನು ಫಿಸಿಕ್ಸ್ ಓದಲು ಹೋಗಬೇಕಿತ್ತು, ಆದರೆ ಇಂಜಿನಿಯರಿಂಗ್ ಗೆ ಹಣ ಕಟ್ಟಿ ಬಂದೆ ಎಂದು ಕೊರಗಿದಾಗ ಕೂಡಲೇ ಅವರು ಕಟ್ಟಿದ ಹಣ ಹೋದರೆ ಹೋಯಿತು ಎಂದು ಅವನನ್ನು ಫಿಸಿಕ್ಸ್ ಆನರ್ಸ್ ಗೆ ಸೇರಿಸಿ ಬಂದ ಘಟನೆ ನನಗೆ ಈಗ ನಡೆದಂತಿದೆ. ಚಿಕ್ಕ ವಯಸ್ಸಿನಲ್ಲೇ ಮನೆಯಿಂದ ಹೊರಬಿದ್ದು ವಾರಾನ್ನದಲ್ಲಿ ಮುಂದೆ ಬಂದ ಅವರಿಗೆ ಜೀವನದ ಯಾವ ತಿರುವುಗಳೂ ಸುಲಭವಾಗಿರಲಿಲ್ಲ.

ಜೀವನದಲ್ಲಿ ಯಾವ ವಿದ್ಯೆಯನ್ನೇ ಕಲಿಯಲಿ, ಯಾವ ಕೆಲಸವನ್ನೇ ಮಾಡಲಿ ಅದರಲ್ಲಿ ಶ್ರದ್ಧೆ, ಅಚ್ಚುಕಟ್ಟುಗಳು ಇರಬೇಕು ಎನ್ನುವುದೇ ಅವರ ಸೂತ್ರವಾಗಿತ್ತು. ಜೀವನದಲ್ಲಿ ಸ್ವಸಾಮರ್ಥ್ಯದಿಂದ ಮುಂದೆ ಬರಬೇಕು ಎನ್ನುವುದು ಅವರ ನಿಲುವಾಗಿತ್ತು. ಈ ಗುಣಗಳು ಯಾರಲ್ಲೇ ಕಂಡುಬರಲಿ ವಯಸ್ಸು, ಜಾತಿ, ಲಿಂಗ ಭೇದವಿಲ್ಲದೆ ಮೆಚ್ಚುತ್ತಿದ್ದ ಅವರ ವಿಶಾಲ ಮನೋಭಾವ ಕಣ್ಣು ತೆರೆಸುವಂತದ್ದು. ಒಮ್ಮೆ ಅವರು ನನಗೆ ಹೇಳಿದ್ದು ಈಗಲೂ ಜ್ಞಾನಪಕದಲ್ಲಿದೆ - "ನಿಮ್ಮಲ್ಲಿರುವ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬನ್ನಿ. ನನ್ನ ಹೆಸರನ್ನು ಮಾತ್ರ ಎಲ್ಲಿಯೂ ಉಪಯೋಗಿಸಿಕೊಳ್ಳಬೇಡಿ."

ನಮ್ಮ ತಂದೆಯವರ ಧೀಮಂತ ವ್ಯಕ್ತಿತ್ವದಲ್ಲಿ ನವಿರಾದ ಹಾಸ್ಯವು ಹಾಸುವಕ್ಕಾಗಿತ್ತು. ನಾನು ಕಲೆಹಾಕಿಕೊಂಡಿದ್ದ ಸೀರೆಯ ರಾಶಿಯನ್ನು ನೋಡಿ ನನಗೆ ಜೀವನವನ್ನು ಎಷ್ಟು ಜಟಿಲಗೊಳಿಸಿಕೊಂಡಿದ್ದೀಯೆ. ದಿನ ಬೆಳಗಾದರೆ ಯಾವ ಬಣ್ಣದ ಸೀರೆಯನ್ನು ಉಡಲು ಎಂದು ಚಿಂತಿಸಬೇಕು, ನನ್ನನ್ನು ನೋಡು, ನನಗೆ ಆ ಸಮಸ್ಯೆ ಇಲ್ಲ ಎಂದು ತಮಾಷೆಮಾಡಿದ್ದುಂಟು.

ಹೀಗೆ ಹೇಳಹೊರಟರೆ ನೆನಪುಗಳು, ಅನುಭವಗಳು ಹಾಗೂ ಅನಿಸಿಕೆಗಳು ಒಂದರ ಮೇಲೊಂದು ಬರುತ್ತಿವೆ. ಒಂದೆರೆಡನ್ನು ಹಂಚಿಕೊಂಡು ಮುಕ್ತಾಯ ಮಾಡುತ್ತೇನೆ. ನಾನು ೨-೩ ವರ್ಷದವಳಿದ್ದಾಗ ಪ್ರತಿದಿನ ಸಂಜೆ ೫ ಘಂಟೆಗೆ ನಮ್ಮ ತಂದೆಗಾಗಿ ಮನೆಯ ಹೊರಗಡೆ ಕಾಯುತ್ತಿದ್ದೆ. ಯಾರು ಏನು ಹೇಳಿದರೂ ಕುಳಿತ ಜಾಗದಿಂದ ಕದಲುತ್ತಿರಲಿಲ್ಲ. ನಾನು ಕಾಯುತ್ತಿರುತ್ತೇನೆಂದು ಅವರು ಧಾವಂತದಿಂದ ಬರುತ್ತಿದ್ದರಂತೆ. ಎತ್ತಿಕೊಂಡು ಒಳಗೆ ಬಂದ ಕೂಡಲೇ ಕೆಳಗಿಳಿದು ಓಡಿಬಿಡುತ್ತಿದ್ದೆ. ಒಮ್ಮೆ ಕಾಲೇಜಿನಿಂದ ಇನ್ನೆಲ್ಲಿಗೋ ಸ್ನೇಹಿತರ ಜೊತೆ ಹೋಗಬೇಕಾದ ಪ್ರಸಂಗ ಬಂದಿತಂತೆ. ನಾನು ಕಾಯುತ್ತಿರುತ್ತೇನೆಂದು ಒಂದು ಕ್ಷಣ ಮನೆಗೆ ಹೋಗಿ ನಂತರ ಹೋಗೋಣ ಎಂದು ಸ್ನೇಹಿತರನ್ನೂ ಜೊತೆಗೆ ಕರೆದುಕೊಂಡು ಬಂದಿದ್ದರಂತೆ.

ಅವರ ಅಂತ್ಯಕಾಲದಲ್ಲಿ ಸುಮಾರು ೩ ತಿಂಗಳ ಕಾಲ ಅವರ ಜೊತೆಗಿರುವ ಸೌಭಾಗ್ಯ ನನ್ನದಾಗಿತ್ತು. ಅವರನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇನೆ ಎಂದು ದೃಢವಾದಗ ತೀವ್ರ ಶೋಕದಿಂದ ಅವರ ಭುಜದ ಮೇಲೆ ಮುಖವಿಟ್ಟು ಅತ್ತಾಗ ಅವರು ನನ್ನ ತಲೆ ಸವರುತ್ತಾ ಹೇಳಿದ ಸಾಂತ್ವನದ ನುಡಿಗಳು ಈಗ ಹೇಳಿದಂತಿದೆ, "ನಲವತ್ತು ವರ್ಷಗಳ ಹಿಂದೆ ಆಗಿದ್ದಕ್ಕೆ (ನಮ್ಮ ತಾಯಿ ನಮ್ಮನ್ನು ಅಗಲಿದ್ದು) ಶೋಕಿಸಬೇಕು. ನನ್ನ ಅಗಲುವಿಕೆಗೆ ಶೋಕಿಸಬೇಡ. ಇದು ಸಹಜ, ಪ್ರಕೃತಿಧರ್ಮ." ನನ್ನ ನಿನ್ನ ಬಾಂಧವ್ಯ ತಂದೆ ಮಗಳಿಗಿಂತ ತಾಯಿ ಮಗನಂತೆ ಇದೆಯಲ್ಲ ಎಂದು ಹೇಳಿದ್ದು, ಈ ದೇಹ ಏನೂ ಪ್ರಯೋಜನವಿಲ್ಲದ್ದು ಎಂದು ಅವರು ಹೇಳಿದಾಗ ನಾನು ಅವರಿಗೆ ಈ ದೇಹ ಇದ್ದಿದ್ದರಿಂದಲೇ ಅಲ್ಲವೇ ನೀವು ಸಮಾಜಕ್ಕೆ ಅಮೂಲ್ಯ ಕೊಡುಗೆ ಕೊಡಲು ಸಾಧ್ಯವಾದುದ್ದು ಎಂದು ಸಮಾಧಾನಪಡಿಸಿದಾಗ, ಅವರ ಮುಖದಲ್ಲಿ ಮೂಡಿದ ಧನ್ಯತಾಭಾವ -- ನನ್ನಲ್ಲಿ ಹಚ್ಚಹಸಿರಾಗಿ ಉಳಿದಿದೆ. ಅವರ ಜೊತೆ ನಾನು ಕಳೆದ ದಿನಗಳಲ್ಲಿ ನನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಅವರು ಕೊಟ್ಟ ಕೊಡುಗೆ ಸಾಟಿ ಇಲ್ಲದ್ದು. ಎಕಾರ್ಟ್ ಟೋಲೆಯ "ದಿ ಪವರ್ ಆಫ್ ನೌ" - ಪುಸ್ತಕದಲ್ಲಿ ಹೇಳುವ ಅನುವಭ ಸಂಪತ್ತು ನನ್ನದಾಯಿತು. ಮಲಗಿದರೆ ಥಟ್ ಎಂದು ಹೋಗಬೇಕು ಎಂದು ಅವರ ಶಿಷ್ಯರಿಗೆ ಹೇಳಿದಂತೆ ರಾಮನಾಮವನ್ನು ಕೇಳುತ್ತ ಮಲಗಿದವರೂ ಸದ್ದಿಲ್ಲದೇ ಯೋಗಿಯಂತೆ ಬ್ರಾಹ್ಮೀ ಮೂರ್ಹತದಲ್ಲಿ ಶಾಶ್ವತವಾಗಿ ನಿರ್ಗಮಿಸಿದರು. ವಿಷಯ ತಿಳಿದ ಪರಮ ಪೂಜ್ಯ ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳು "ಉಪರತೋ ಜ್ಞಾನರಾಶಿಃ" ಎಂದು ಉದ್ಗರಿಸಿದರಂತೆ. ಅಂತಹ ತಂದೆಯನ್ನು ಪಡೆದ ಹೆಮ್ಮೆ ನಮ್ಮದಾಗಿದೆ.